ಕಣಜಗಳು : ಕೀಟವರ್ಗದ ಹೈಮೆನಾಪ್ಟಿರ ಗಣಕ್ಕೆ ಸೇರಿದ ಕೀಟಗಳು. ಕಡಿಯಲು ಅಥವಾ ಹೀರಲು ಅನುವಾದ ವದನಾಂಗಗಳು, ನಾಲ್ಕು ನಯವಾದ ಪಾರದರ್ಶಕ ರೆಕ್ಕೆಗಳು, ಡಿಂಭಗಳಿಗೆ ಕಾಲುಗಳಿಲ್ಲದಿರುವುದು, 12-13 ಖಂಡಗಳುಳ್ಳ ಕುಡಿಮೀಸೆಗಳು, ಉದರಕ್ಕೂ 

ಎದೆಗೂ ನಡುವೆ ತೊಟ್ಟಿನಂತರಿವ ನಡು-ಇವು ಈ ಗಣದ ಮುಖ್ಯ ಲಕ್ಷಣಗಳು. ಕಣಜಗಳು ಸಾಮಾನ್ಯವಾಗಿ ಮಾಂಸಾಹಾರಿಗಳು. ಕೆಲವು ಬಗೆಯವು ಪರಾವಲಂಬಿಗಳು. ಸು. 20,000ಕ್ಕೂ ಹೆಚ್ಚು ಪ್ರಭೇದಗಳಿವೆ. ಕಣಜಗಳಲ್ಲಿ ಮುಖ್ಯವಾಗಿ ಎರಡು ವಿಧ. ಒಂದು 

ಬಗೆಯವು ಸಂಘಜೀವನ ನಡೆಸುವಂಥವು (ಸೋಷಿಯಲ್ ವ್ಯಾಸ್ಟ್‌್ಸ). ಇವುಗಳಲ್ಲಿ ಜೇನುನೊಣಗಳಲ್ಲಿರುವಂತೆಯೇ ವ್ಯವಸ್ಥಿತ ಸಮಾಜವಿದೆ. ಅದರಲ್ಲಿ ರಾಣಿ, ಹಲವಾರು ಗಂಡುಗಳು ಮತ್ತು ಬಹುಸಂಖ್ಯೆಯಲ್ಲಿ ಕೆಲಸಗಾರ ಕಣಜಗಳು ಇರುತ್ತವೆ. ರಾಣಿಕಣಜ, ಗಂಡು 

ಮತ್ತು ಕೆಲಸಗಾರ ಕಣಜಗಳಿಗಿಂತ ಗಾತ್ರದಲ್ಲಿ ದೊಡ್ಡದು. ರಾಣಿ ಮತ್ತು ಕೆಲಸಗಾರ ಕಣಜಗಳ ಉದರದ ತುದಿಯಲ್ಲಿ ವಿಷದ ಕೋಶ ಮತ್ತು ಹಿಂದಕ್ಕೆಳೆದುಕೊಳ್ಳಬಹುದಾದ ಮುಳ್ಳು ಇವೆ. ಸಾಮಾನ್ಯವಾಗಿ ಈ ಬಗೆಯ ಕಣಜಗಳು ಕುಳಿತಾಗ ಅವುಗಳ ರೆಕ್ಕೆ ಉದ್ದುದ್ದನಾಗಿ 

ಮಡಿಸಿಕೊಳ್ಳುತ್ತವೆ. ಇನ್ನೊಂದು ಬಗೆಯ ಕಣಜಗಳು ಒಂಟಿಜೀವನ ನಡೆಸುವಂಥವು (ಸಾಲಿಟರಿ ವ್ಯಾಸ್ಟ್‌್ಸ). ಬಹುಪಾಲು ಕಣಜಗಳು ಈ ಬಗೆಯವು. ಕಣಜಗಳನ್ನು ಅವುಗಳ ಆಕಾರ, ಜೀವನ ಹಾಗೂ ಗೂಡುಕಟ್ಟುವ ರೀತಿಗಳ ಆಧಾರದ ಮೇಲೆ ಹಲವಾರು 

ಕುಟುಂಬಗಳಾಗಿ ವಿಂಗಡಿಸಿದ್ದಾರೆ. ಗುಂಪುಜೀವನ ನಡೆಸುವ ಕಣಜಗಳು ವೆಸ್ಪಿಡೀ ಕುಟುಂಬಕ್ಕೆ ಸೇರಿವೆ. ಉಳಿದುವು ವೆಸ್ಪಿಡೀ ಕುಟುಂಬವೊಂದೇ ಅಲ್ಲದೆ ಪಾಂಪಿಲಿಡೀ, ಸ್ಪೆಸಿಡೀ, ಯೂಮೆನಿಡೀ, ಮ್ಯೂಟಿಲಿಡೀ, ಟೈಫೈಯಿಡೀ, ಸ್ಕೋಲೈಯಿಡೀ ಇತ್ಯಾದಿ ಕುಟುಂಬಗಳಿಗೆ 

ಸೇರಿವೆ. ಕಣಜಗಳಲ್ಲಿ ಹಲವಾರು ಜಾತಿಗಳೂ ಉಂಟು; ವೆಸ್ಪ, ವೆಸ್ಪುಲ, ಪಾಲಿಸ್ಟಿಸ್, ಡಾಲಿಕೋವೆಸ್ಪುಲ, ಟೈಫಿಯ, ಬ್ರ್ಯಾಕಿಗಾಸ್ಟ್ರ ಮುಂತಾದುವು ಮುಖ್ಯ ಜಾತಿಗಳು. ಭಾರತದಲ್ಲಿ ಬಹಳ ಸಾಮಾನ್ಯವಾಗಿ ಕಾಣಬರುವ ಕಣಜವೆಂದರೆ ವೆಸ್ಪುಲ ಇಂಡಿಕಸ್ ಎಂಬ ಪ್ರಬೇಧ. 

ಸಂಘಜೀವನ ನಡೆಸುವ ಇದರಲ್ಲಿ ದೇಹದ ಬೆನ್ನು ಭಾಗದಲ್ಲಿ ಹಳದಿ ಮತ್ತು ಕಪ್ಪು ಪಟ್ಟಿಗಳಿವೆ. ಸಂಘಜೀವನ ನಡೆಸುವ ಕಣಜಗಳು ದೊಡ್ಡ ದೊಡ್ಡ ಗೂಡುಗಳನ್ನು ಕಟ್ಟಿ ವಾಸಿಸುತ್ತವೆ. ಮರ ಅಥವಾ ಎಲೆಗಳನ್ನು ಅಗಿದು ಜೊಲ್ಲಿನೊಡನೆ ಸೇರಿಸಿ ಅದರಿಂದ ಉಂಟಾಗುವ 

ಗಾರೆಯಂಥ ವಸ್ತುವನ್ನು ಗೂಡು ಕಟ್ಟಲು ಉಪಯೋಗಿಸುತ್ತವೆ. ಸಾಮಾನ್ಯವಾಗಿ ನೆಲದಲ್ಲೊ ಮರಗಳ ಪೊಟರೆಗಳಲ್ಲೊ, ಎಲೆ ಮತ್ತು ಕೊಂಬೆಗಳ ತುದಿಯಲ್ಲೊ ಗೂಡು ಕಟ್ಟುವುದು ವಾಡಿಕೆ. ಗೂಡುಗಳ ಆಕಾರವೂ ವಿವಿಧ ಬಗೆಯದು. ಗೂಡುಗಳಲ್ಲಿ ಜೇನುಗೂಡಿನಲ್ಲಿರುವಂತೆ 

ಹಲವಾರು ಷಡ್ಭುಜಾಕೃತಿಯ ಸಣ್ಣ ಸಣ್ಣ ಕೋಣೆಗಳಿವೆ. ಹಲವಾರು ಪದರಗಳಲ್ಲಿ ಜೋಡಿಸಲಾಗಿರುವ ಈ ಕೋಣೆಗಳ ಸುತ್ತ ಕಾಗದದಂಥ ತೆಳುವಾದ ಹೊದಿಕೆಯಿರುತ್ತದೆ. ಕೆಳಮೊಗನಾಗಿ ತೆರೆಯುವ ಬಾಗಿಲೂ ಇರುತ್ತದೆ. ರಾಣಿಕಣಜ ಕೋಣೆಗೊಂದರಂತೆ ಮೊಟ್ಟೆಯಿಡುತ್ತ 

ಹೋಗುತ್ತದೆ. ಮೊಟ್ಟೆಗಳನ್ನು ಅಂಟಿನಂಥ ದ್ರವದಿಂದ ಕೋಣೆಯ ಗೋಡೆಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಮೊಟ್ಟೆಯೊಡೆದು ಡಿಂಭಗಳು ಹೊರಬಂದಾಗ ಕೆಲಸಗಾರ ಕಣಜಗಳು ಅವಕ್ಕೆ ಹಲವಾರು ಬಗೆಯ ಆಹಾರವಸ್ತುಗಳನ್ನು (ಹೂಗಳು, ಹಣ್ಣುಗಳು, ಬೇರೆ ಕೀಟಗಳು) 

ಅಗಿದು ತಮ್ಮ ಜೊಲ್ಲಿನೊಂದಿಗೆ ಸೇರಿಸಿ ತಿನ್ನಿಸುತ್ತದೆ. ಬ್ರ್ಯಾಕಿಗ್ಯಾಸ್ಟ್ರ ಪ್ರಭೇದದ ಕಣಜ ಹೂಗಳಿಂದ ಮಧುವನ್ನು ಶೇಖರಿಸಿ ಡಿಂಭಗಳಿಗೆ ಆಹಾರವಾಗಿ ಒದಗಿಸುವುದೂ ಉಂಟು. ಸಾಮಾನ್ಯವಾಗಿ ಸಂಘಜೀವಿ ಕಣಜಗಳು ಚಳಿಗಾಲಕ್ಕೆಂದು ಆಹಾರ ಶೇಖರಣೆ 

ಮಾಡುವುದಿಲ್ಲವಾದ್ದರಿಂದ ಆ ಕಾಲದಲ್ಲಿ ಚಳಿ ತಡೆಯಲಾರದ ಗಂಡು ಹಾಗೂ ಕೆಲಸಗಾರ ಕಣಜಗಳು ಸತ್ತುಹೋಗುತ್ತವೆ. ಆದರೆ ರಾಣಿ ಮಾತ್ರ ಬೆಚ್ಚಗಿರುವ ಪೊಟರೆಗಳಲ್ಲಿ ಅಥವಾ ಬಿಲಗಳಲ್ಲಿ ಚಳಿಗಾಲವನ್ನು ಕಳೆದು ಬೇಸಗೆಯಲ್ಲಿ ಹೊಸದಾಗಿ ಗೂಡುಕಟ್ಟಿ 

ಸಂಘಜೀವನವನ್ನು ಪುನಃ ಆರಂಭಿಸುತ್ತದೆ. ಹಲವಾರು ಬಗೆಯ ಸಂಘ ಜೀವಿ ಕಣಜಗಳು ಪರಾವಲಂಬಿಗಳಾಗಿರುವುದೂ ಉಂಟು. ಇಂಥವುಗಳಲ್ಲಿ ಕೆಲಸಗಾರ ಕಣಜಗಳಿರುವುದಿಲ್ಲ.
ಒಂಟಿಜೀವನ ನಡೆಸುವ ಕಣಜಗಳಲ್ಲೂ ಗೂಡು ಕಟ್ಟುವ ಪದ್ಧತಿ ಇದೆ. ಅಲ್ಲದೆ ಗೂಡು ಕಟ್ಟುವ ವಿಧಾನವೂ ಹೆಚ್ಚು ವೈಶಿಷ್ಟ್ಯಪುರ್ಣ. ಕೆಲವು ನೆಲದಲ್ಲಿ ಬಿಲತೋಡಿ ಗೂಡು ಮಾಡಿದರೆ (ಜೇಡ ಕಣಜ), ಇನ್ನು ಕೆಲವು ಮರಗಳಲ್ಲಿ, ಬೆಂಡುಗಿಡಗಳ ಕಾಂಡಗಳಲ್ಲಿ, ಗಿಡಮರಗಳ 

ರೆಂಬೆಗಳಲ್ಲಿ ತೂಗುತ್ತಿರುವಂತೆ ಗೂಡು ಕಟ್ಟುತ್ತವೆ. ಗೂಡುಕಟ್ಟಲು ಅವು ಉಪಯೋಗಿಸುವ ವಸ್ತುಗಳೂ ಅಷ್ಟೇ ವೈಶಿಷ್ಟ್ಯಪುರ್ಣ. ಗಾರೆಕಣಜಗಳು (ಪಾಟರ್ ವ್ಯಾಸ್ಪ್‌್ಸ) ಮಣ್ಣು ಮತ್ತು ಮರದ ಹೊಟ್ಟನ್ನು ತನ್ನ ಜೊಲ್ಲಿನೊಂದಿಗೆ ಮಿಶ್ರಮಾಡಿ ಗಾರೆಯಂಥ ವಸ್ತುವನ್ನು 

ತಯಾರಿಸಿ ಅದರಿಂದ ಹೂಜಿಯಾಕಾರದ ಗೂಡು ಕಟ್ಟುತ್ತವೆ. ಇನ್ನು ಕೆಲವು ಮರದ ಹೊಟ್ಟಿನಿಂದ ಒಂದು ರೀತಿಯ ಕಾಗದವನ್ನು ತಯಾರಿಸಿ ಉಪಯೋಗಿಸುತ್ತವೆ. ತಮ್ಮ ಗೂಡುಗಳಲ್ಲಿ ಅನೇಕ ಬಗೆಯ ಕೀಟ, ಕಂಬಳಿಹುಳು, ಜೇಡಗಳನ್ನು ಆಹಾರಕ್ಕಾಗಿ ಸಂಗ್ರಹಿಸುವುವು. 

ಸಾಧಾರಣವಾಗಿ ಗೂಡಿನಲ್ಲಿ ಮೊಟ್ಟೆಯಿಡುವ ಮುನ್ನ ಯಾವುದಾದರೊಂದು ಬಗೆಯ ಕೀಟ ಅಥವಾ ಕಂಬಳಿ ಹುಳುವನ್ನು ಹಿಡಿದು ತಂದು, ತಮ್ಮ ಬಲವಾದ ಮುಳ್ಳಿನಿಂದ ಕುಟುಕಿ ಅವನ್ನು ನಿಶ್ಚೇತನಗೊಳಿಸಿ ಗೂಡಿನನೊಳಕ್ಕೆ ತುರುಕುತ್ತವೆ. ಆಮೇಲೆ ಮೊಟ್ಟೆಯಿಡುತ್ತವೆ. 

ಮೊಟ್ಟೆಯೊಡೆದು ಹೊರಬಂದ ಡಿಂಭ ಇವನ್ನು ತಿಂದು ಬೆಳೆಯುತ್ತದೆ.
ಒಂಟಿಜೀವನ ನಡೆಸುವ ಕೆಲವು ಬಗೆಯ ಕಣಜಗಳು ಪರತಂತ್ರ ಜೀವಿಗಳಾಗಿವೆ. ಇವು ಗೂಡು ಕಟ್ಟಲಾರವು. ಇವುಗಳಲ್ಲಿ ಕೋಗಿಲೆ ಕಣಜ (ಕಕೂ ವ್ಯಾಸ್ಟ್‌) ಮತ್ತು ಮಕಮಲ್ಲು ಇರುವೆ (ವೆಲ್ವೆಟ್ ಆಂಟ್) ಮುಖ್ಯವಾದುವು. ಮಿರುಗುವ ಹಸಿರು ಅಥವಾ ನೀಲಿ ಬಣ್ಣದ ಕೋಗಿಲೆ 

ಕಣಜ ಒಂಟಿಜೇನು ಅಥವಾ ಇತರ ಕಣಜಗಳ ಗೂಡಿನಲ್ಲಿ ತನ್ನ ಮೊಟ್ಟೆಗಳನ್ನಿಡುತ್ತದೆ. ಅದರಿಂದ ಬರುವ ಡಿಂಭಗಳು ಜೇನಿನ ಅಥವಾ ಇತರ ಕಣಜಗಳ ಮರಿಗಳನ್ನು ತಿಂದು ಇಲ್ಲವೆ ಆತಿಥೇಯ ಪ್ರಾಣಿ ತನ್ನ ಮರಿಗಳಿಗಾಗಿ ಸಂಗ್ರಹಿಸಿಟ್ಟ ಆಹಾರವನ್ನು ತಿಂದು 

ಬೆಳೆಯುತ್ತವೆ. ಮಕಮಲ್ಲು ಇರುವೆ ಎನ್ನುವ ಕಣಜದ ದೇಹದ ಮೇಲೆ ಉದ್ದವಾದ ಮತ್ತು ದಪ್ಪವಾದ ಕಪ್ಪು ಅಥವಾ ಕೆಂಪು ಕೂದಲುಗಳಿವೆ. (ಅದರಿಂದಲೇ ಈ ಹೆಸರು). ಹೆಣ್ಣುಗಳಲ್ಲಿ ರೆಕ್ಕೆಗಳಿಲ್ಲ. ಅವು ಇರುವೆಯಂತೆಯೇ ಕಾಣುತ್ತದೆ. ಗಂಡುಗಳಲ್ಲಿ ಮಾತ್ರ ರೆಕ್ಕೆಯಿದೆ. 

ಇವುಗಳಲ್ಲಿ ಹಲವಾರು ಪ್ರಭೇದಗಳಿದ್ದು, ಯುರೋಪಿನ ಒಂದು ಪ್ರಭೇದ ದುಂಬಿಯ ಮೇಲೂ ಆಫ್ರಿಕದ ಒಂದು ಪ್ರಭೇದ ಸೆಸೆ ನೊಣದ ಮೇಲೂ ಪರತಂತ್ರ ಜೀವಿಗಳಾಗಿ ಜೀವಿಸುತ್ತವೆ. ಟೈಫೈಯಿಡೀ ಮತ್ತು ಸ್ಕೋಲೈಯಿಡೀ ಕುಟುಂಬದ ಕಣಜಗಳು ಕೆಲವು ಬಗೆಯ 

ಜೀರುಂಡೆಗಳ ಮೇಲೆ ಪರಾವಲಂಬಿಯಾಗಿರುತ್ತವೆ. ಮೊಟ್ಟೆಗಳನ್ನೂ ಅವುಗಳ ಮೇಲೆಯೇ ಇಡುತ್ತವೆ. ಡಿಂಭಗಳು ಜೀರುಂಡೆಗಳನ್ನು ಭಕ್ಷಿಸಿ ಬೆಳೆಯುತ್ತವೆ.
ಈ ರೀತಿ ಬಹಳ ಸೋಜಿಗದ ಜೀವನ ಸಾಗಿಸುವ ಕಣಜಗಳು ಮಾನವನಿಗೆ ಉಪಕಾರಿಗಳೂ ಹೌದು. ಇತರ ಕೀಟಗಳನ್ನೂ ಡಿಂಭಗಳನ್ನೂ ತಿಂದು ಜೀವಿಸುವುದರಿಂದ ಹಿಂದೆ, ಅಮೆರಿಕದಲ್ಲಿ ಬೆಳೆಗಳನ್ನು ನಾಶಪಡಿಸುತ್ತಿದ್ದ ಜಪಾನೀ ಜೀರುಂಡೆಗಳನ್ನು ತಡೆಗಟ್ಟಲು ಟೈಫಿಯ 

ಎಂಬ ಕಣಜಗಳನ್ನು ಜೈವಿಕ ನಿಯಂತ್ರಣಕ್ಕಾಗಿ ಬಳಸಲಾಗಿತ್ತು.
(ಎಚ್.ಬಿ.ಡಿ.; ಎಸ್.ವಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ